ಸಾಲ್ಮೊನ್ಜೀವಿ ವರ್ಗ: ಈ ವರ್ಗದ ಏಕಾಣುಜೀವಿಗಳಲ್ಲಿ 650ಕ್ಕೂ ಮಿಗಿಲಾಗಿ ಗೊತ್ತಿರುವ ಬಗೆಗಳ ರಸಿಕೆ ಮಾದರಿಗಳಿವೆ. ಉಪವಿಷಮಶೀತಜ್ವರದ (ಪ್ಯಾರಟೈಫಾಯ್ಡ್) ಏಕಾಣುಜೀವಿಗಳಿವು. ಇದರಲ್ಲಿ ಕೆಲವಂತೂ 1888ರಲ್ಲೇ ಆಹಾರ ವಿಷವೇರಿಕೆಗೆ ಕಾರಣವಾಗಿದ್ದುವು. ಆಕಾರ, ಗಾತ್ರ, ಬಣ್ಣವೇರಿಕೆ ಗುಣಗಳು, ಅಂಗಕ್ರಿಯೆ, ಮರೆವಣೆ (ಇಮ್ಯುನಾಲಜಿ), ಕರುಳಲ್ಲಿನ ವಾಸ ಇವಲ್ಲೆಲ್ಲ ಈ ವರ್ಗದವು ವಿಷಮಜ್ವರದ ಏಕಾಣುಜೀವಿಗಳನ್ನೇ ಹೋಲುತ್ತವೆ. ಇವು ಮಾನವ ರೋಗಿಯಲ್ಲೇ ಅಲ್ಲದೆ, ಬೇರೆ ಪ್ರಾಣಿಗಳ ಕರುಳುಗಳಲ್ಲೂ ಇದ್ದು ಬೆಳೆವುದುಂಟು. 
ಸಾಲೆಮನ್ಜೀವಿವರ್ಗದ ಕೆಲವು ರೋಗಾಣುಗಳಿಂದ ವಿಷಮಶೀತಜ್ವರದ ತೆರನ ಜ್ವರ ಬರುವುದು. ಅದರ ರೋಗಾಣುವನ್ನು ಕಂಡುಕೊಳ್ಳುವುದರಿಂದ ಮಾತ್ರ ರೋಗ ಗೊತ್ತಾಗುವುದು. ಉಳಿದವಿಂದ ಸುಮ್ಮನೆ ಉಚ್ಚಾಟವಾಗುವುದಷ್ಟೆ. ಈ ರೋಗಾಣುಗಳಿಲ್ಲವಾದರೆ, ಕುದಿಸಿದಾಗ ರೋಗಾಣುಗಳು ಸತ್ತಿದ್ದರೆ, ಅಂಥ ಆಹಾರದಿಂದ ಈ ಬೇನೆ ಏಳದು. ಈ ರೋಗಾಣುಗಳು ಒಳಸೇರಿದ 7-72 ತಾಸುಗಳಲ್ಲೇ ಆಹಾರ ವಿಷವೇರಿ, ಓಕರಿಕೆ, ವಾಂತಿ, ಹೊಟ್ಟೆನೋವು, ಉಚ್ಚಾಟಗಳಾಗುವುವು. ಮೊದ ಮೊದಲು ತಲೆನೋವು, ಚಳಿ, ನಡುಕ, ತುಸು ಹೊಟ್ಟೆನೋವು, ಉಚ್ಚಾಟಗಳಿರಬಹುದು. ಉಚ್ಚಾಟ ಕೆಟ್ಟನಾತದೊಂದಿಗೆ ನೀರು ನೀರಾಗಿರುತ್ತದೆ. ವಿಪರೀತವಾದಾಗ, ಜ್ವರವೇರಿ ಸುಸ್ತು, ಸ್ನಾಯು ನಿತ್ರಾಣ, ಬವಳಿ ಬರುವಿಕೆ, ಬಾಯಾರಿಕೆ ಆಗುತ್ತದೆ. ಬಿಳಿರಕ್ತಕಣಗಳ ಎಣಿಕೆ ಏರುತ್ತದೆ. ಒಂದೊಂದು ಬಾರಿ ಕಾಣಿಸಿಕೊಂಡ ಬೇನೆಯೂ ಅಷ್ಟೇ ಜೋರಾಗಿರದು. ಹಾಗೆ ಬೇನೆ ಬಿದ್ದವರೆಲ್ಲರಲ್ಲೂ ಒಂದೇ ತೆರನಾಗಿರದು. ಅಂತೂ ಕೆಲವು ತಾಸುಗಳಲ್ಲೋ ದಿನಗಳಲ್ಲೋ ರೋಗಿ ಬೇಗನೆ ಚೇತರಿಸಿಕೊಳ್ಳುವನು. 
ಸಾಲೆಮನ್ಜೀವಿ ಆಹಾರ ವಿಷವೇರಿಕೆ ಪ್ರಪಂಚದಲ್ಲಿ ಎಲ್ಲೆಡೆಗಳಲ್ಲೂ ಕಾಣಿಸಿಕೊಂಡಿದೆ. ಈ ಬೇನೆ ಬಿದ್ದವರೆಲ್ಲರೂ ವೈದ್ಯರ ಗಮನಕ್ಕೆ ಬಾರದ್ದರಿಂದ ನಿಜವಾದ ರೋಗಿಗಳ ಅಂಕಿ ಖಚಿತವಾಗಿ ಸಿಗುವಂತಿಲ್ಲ. ಅನೇಕವೇಳೆ ಸೊಂಕು ಹತ್ತಿದ ಪ್ರಾಣಿಗಳಿಂದಲೋ ಆಹಾರ ತಯಾರಿಸಿ ಎತ್ತಿಡುವಾಗ ಸೊಂಕು ಹತ್ತಿದ ಪ್ರಾಣಿ ಇಲ್ಲವೇ ಜನರಿಂದಲೋ ಆಹಾರದಲ್ಲಿ ವಿಷಗೂಡುತ್ತದೆ. ಸಾಲ್ಮೊನ್ ಜೀವಿಯಿಂದ ಸೊಂಕು ಹತ್ತಿದ ಆಹಾರದಲ್ಲಿ ಯಾವ ಕೆಟ್ಟ ವಾಸನೆಯಾಗಲಿ, ರುಚಿಯಾಗಲಿ ಇರದು. 
ಸಾಲೆಮನ್ಜೀವಿ ಸೋಂಕುಗಳನ್ನು ಜೀವಿವಿರೋಧಕಗಳಿಂದ ಚಿಕಿತ್ಸೆ ಮಾಡಬಹುದು. ಸಾಲೆಮನ್ಜೀವಿ ಸೋಂಕು ಹತ್ತಿದ ಪ್ರಾಣಿಗಳಿಂದ ಬಂದ ಮಾಂಸವನ್ನು ಪಟ್ಟಣಗಳ ಕಟುಕರ ಅಂಗಡಿಗಳಲ್ಲಿ ಮಾರಲುಬಿಡದೆ, ಜನರು ಕೊಂಡು ಬಳಸದಂತೆ ಪುರಸಭಾಧಿಕಾರಿಗಳು ತಡೆಯುವರು. ಸೋಂಕು ಹತ್ತಿರುವ ಹಸುಗಳಿಂದ ಬಂದ ಹಾಲನ್ನು ಸಾಕಷ್ಟು ಪ್ಯಾಶ್ಚರೀಕರಿಸಿದರೆ, ಸಾಲೆಮನ್ ಜೀವಿಗಳು ಸಾಯುತ್ತವೆ. ಚೆನ್ನಾಗಿ ಕಾಣುವ ಕೆಲವು ಪ್ರಾಣಿಗಳ ಕರುಳುಗಳಲ್ಲೂ ಸಾಲೆಮನ್ಜೀವಿಗಳು ಇರಬಹುದಾದ್ದರಿಂದ (ಹೊರುಗಗಳು), ಪ್ರಾಣಿಗಳಿಂದ ಬಂದ ಬೇಯಿಸದ ಆಹಾರಕ್ಕೂ ಸೋಂಕು ಹತ್ತಬಹುದು. ಆಗ ಸಾಲೆಮನ್ಜೀವಿಗಳು ತೀರ ಕಡಿಮೆ ಇರುವುದರಿಂದ ಆಹಾರವನ್ನು ಚೆನ್ನಾಗಿ ಬೇಯಿಸಿದರೆ, ನೀರ್ಗಲ್ಲಿನ ತಂಪಿನಲ್ಲಿ ಇರಿಸಿದ್ದರೆ ಯಾವ ಕೆಡುಕೂ ಕಾಣಲಾರದು. ಹೀಗೇ ಇಲಿಗಳೊ, ಚಿಟ್ಟಿಲಿಗಳೊ (ಮೈಸ್) ಸಾಲ್ಮೊನ್ಜೀವಿಗಳನ್ನು ಸಾಗಿಸಬಹುದು. ಆದ್ದರಿಂದ ಆಹಾರ ವಸ್ತುಗಳು ಅವಕ್ಕೆ ಎಟುಕದಂತೆ ಎತ್ತಿರಿಸಬೇಕು. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ